ಅಫ್ಜಲ್ ಖಾನ್
	ಬಿಜಾಪುರದ ಸುಲ್ತಾನನ ಸಾಮಂತ ಹಾಗೂ ದಳಪತಿಗಳಲ್ಲೊಬ್ಬ. ಶಿವಾಜಿ ಬಿಜಾಪುರದ ಕೆಲವು ದುರ್ಗಗಳನ್ನು ಆಕ್ರಮಿಸಿದಾಗ ಅವನೊಡನೆ ಹೋರಾಡಲು ಸೇನಾಸಮೇತನಾಗಿ ಬಂದ. ಇಬ್ಬರ ನಡುವೆ ಸಂಧಾನಕ್ಕೆ ಏರ್ಪಾಡಾಯಿತು. ಇಬ್ಬರೂ ಸೇರಿದಾಗ ಶಿವಾಜಿ ಗುಪ್ತವಾಗಿಟ್ಟುಕೊಂಡಿದ್ದ ವ್ಯಾಘ್ರನಖವೆಂಬ ಆಯುಧದಿಂದ ಖಾನನನ್ನು ತಿವಿದು ಮೋಸದಿಂದ ಕೊಂದನೆಂದು ಮುಸಲ್ಮಾನ ಚರಿತ್ರಕಾರರು ಬರೆಯುತ್ತಾರೆ. ಮರಾಠಾ ಇತಿಹಾಸಕಾರರು ಖಾನನೇ ಕೊಲೆಯ ತಂತ್ರ ಹೂಡಿದ್ದನೆಂದೂ ಅದನ್ನು ತಿಳಿದು ಶಿವಾಜಿ ಆತ್ಮರಕ್ಷಣೆಗಾಗಿ ಅವನನ್ನು ಕೊಂದನೆಂದೂ ಬರೆಯುತ್ತಾರೆ. ಖಾನನ ಸೈನ್ಯ ಬೆದರಿ ಓಡಿತು. ಶಿವಾಜಿಯನ್ನಡಗಿಸಲು ಮಾಡಿದ ಬಿಜಾಪುರ ಸರ್ಕಾರದ ಪ್ರಯತ್ನಗಳು ವಿಫಲವಾಗಿ ದಖನ್ನಿನಲ್ಲಿ ಶಿವಾಜಿಯ ಅಧಿಕಾರ ನೆಲೆನಿಂತಿತು.     

(ಎಸ್.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ